ಪರಿಸರ ಸಂರಕ್ಷಣೆಯು ಇಂದಿನ ಕಾಲದ ಮಹತ್ತರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಹಸಿರು ಪರಿಸರವೇ ಮುಂದಿನ ಪೀಳಿಗೆಗೆ ನೀಡಬಹುದಾದ ಅತ್ಯಮೂಲ್ಯ ಪರಂಪರೆ ಎಂಬ ಧ್ಯೇಯದೊಂದಿಗೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವತಿಯಿಂದ, ಪರಿಸರ ಮತ್ತು ಸಸ್ಯಪ್ರೇಮಿಯಾಗಿದ್ದ ದಿವಂಗತ ಶ್ರೀಮತಿ ರಸಿಕ ಅವರ ಪವಿತ್ರ ಸ್ಮರಣಾರ್ಥ 'ಸಸ್ಯಶ್ಯಾಮಲಾ–2026' ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಒಂದು ಸಾವಿರ ಸಸಿಗಳನ್ನು ನೆಡುವ ಈ ಮಹತ್ವಾಕಾಂಕ್ಷಿ ಯೋಜನೆಯು ಕಾಲೇಜಿನ ಪ್ರವೇಶದ್ವಾರದಲ್ಲಿ ಸಸಿ ನೆಡುವ ಮೂಲಕ ಅಧಿಕೃತವಾಗಿ ಆರಂಭವಾಯಿತು.
ಹಿರಿಯ ಸಮಾಜಸೇವಕ ಶ್ರೀ ಜಯರಾಜ್ ಕಂಬಳಿ ಅವರು ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿ, ಹಸಿರು ಪರಿಸರ ನಿರ್ಮಾಣವು ಪ್ರತಿಯೊಬ್ಬರ ಜೀವನಧರ್ಮವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, "ಶ್ರೀಮತಿ ರಸಿಕ ಅವರ ನೆನಪಿನಲ್ಲಿ ಆರಂಭಗೊಂಡಿರುವ ಈ 'ಸಸ್ಯಶ್ಯಾಮಲಾ–2026' ಅಭಿಯಾನವು ಅವರ ಪರಿಸರಪ್ರೇಮಕ್ಕೆ ಶಾಶ್ವತ ಗೌರವವಾಗಲಿ. ಪ್ರತಿಯೊಂದು ಸಸಿಯೂ ಕೇವಲ ಒಂದು ಗಿಡವಲ್ಲ; ಅದು ಮುಂದಿನ ಪೀಳಿಗೆಗೆ ನಾವು ನೀಡುವ ಜೀವದ ಉಸಿರು. ವಿದ್ಯಾರ್ಥಿಗಳಲ್ಲಿ ಪ್ರಕೃತಿ ಸಂರಕ್ಷಣೆಯ ಜವಾಬ್ದಾರಿ, ಪರಿಸರದ ಬಗ್ಗೆ ಪ್ರೀತಿ ಮತ್ತು ಜೈವಿಕ ವೈವಿಧ್ಯದ ಕುರಿತು ಅರಿವು ಮೂಡಿಸುವುದರ ಜೊತೆಗೆ ಹಸಿರು-ಸಮೃದ್ಧ ಕ್ಯಾಂಪಸ್ ನಿರ್ಮಾಣವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ," ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಎಸ್.ಡಿ.ಎಂ. ಕಾಲೇಜಿನ ಮಾಜಿ ಪ್ರಾಂಶುಪಾಲ ದಿನೇಶ್ ಚೌಟ, ಶ್ರೀಮತಿ ರೇಖಾ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರುತಿ, ಉಪನ್ಯಾಸಕರಾದ ಶ್ರೀಮತಿ ಶ್ರದ್ಧಾ, ಕುಮಾರಿ ವೈಷ್ಣವಿ, ಕುಮಾರಿ ಸೌಮ್ಯ, ಶ್ರೀಮತಿ ದಿವ್ಯಲಕ್ಷ್ಮಿ ರೈ, ಶ್ರೀಮತಿ ವೀರ ಕ್ರಾಸ್ತ, ಇಂಜಿನಿಯರ್ ಶಂಕರ್ ಭಟ್ , ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವರೂಪ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಭಿಯಾನಕ್ಕೆ ಶುಭ ಹಾರೈಸಿದರು.
ಭಾಷಾ ವಿಭಾಗದ ಮುಖ್ಯಸ್ಥ ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮವನ್ನು ನಿರೂಪಿಸಿದರು.