ಎಕ್ಸಲೆಂಟ್ ಶಾಲೆಯಲ್ಲಿ ಭಾರತ್ ವಂದನ ಕಾರ್ಯಕ್ರಮ; ಕಾರ್ಗಿಲ್ ಯೋಧರಿಗೆ ಸಂದ ನಿಜವಾದ ಗೌರವ

ಎಕ್ಸಲೆಂಟ್ ಶಾಲೆಯಲ್ಲಿ ಭಾರತ್ ವಂದನ ಕಾರ್ಯಕ್ರಮ; ಕಾರ್ಗಿಲ್ ಯೋಧರಿಗೆ ಸಂದ ನಿಜವಾದ ಗೌರವ- ಕರ್ನಲ್ ನಿತಿನ್ ಭಿಡೆ ಮೂಡುಬಿದಿರೆ, ಜುಲೈ 29: ದೇಶದ ಅಖಂಡತೆ, ಸಾರ್ವಭೌಮತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಭಾರತೀಯ ವೀರ ಯೋಧರ ಅಮೋಘ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಉದ್ದೇಶದಿಂದ ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ 26ನೇ ಕಾರ್ಗಿಲ್ ವಿಜಯ ದಿವಸವನ್ನುಅತ್ಯಂತ ವಿಜೃಂಭಣೆಯಿಂದ ಹಾಗೂ ದೇಶಭಕ್ತಿಯ ಭಾವನೆಗಳನ್ನು ಉದ್ದೀಪಿಸುವ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೇನಾ ಅಧಿಕಾರಿ ಕರ್ನಲ್ ನಿತಿನ್ ಬೀಡೆ ಅವರು ಮಾತನಾಡಿ, “ಭಾರತೀಯ ಸೈನಿಕರ ಜೀವನವು ಕೇವಲ ಉದ್ಯೋಗವಲ್ಲ, ಅದು ರಾಷ್ಟ್ರಸೇವೆಯ ಮಹಾನ್ ಸಂಕಲ್ಪವಾಗಿದೆ ಎಂದು ಹೇಳಿದರು. ಹಿಮಾಚ್ಛಾದಿತ ಪರ್ವತಗಳು, ಉರಿ ಬಿಸಿಲಿನ ಮರುಭೂಮಿಗಳು, ದಟ್ಟ ಕಾಡುಗಳು ಹಾಗೂ ದುರ್ಗಮ ಗಡಿಭಾಗಗಳಲ್ಲಿ ತಮ್ಮ ಕುಟುಂಬದಿಂದ ದೂರವಿದ್ದು ಹಗಲು-ರಾತ್ರಿ ದೇಶದ ಗಡಿಯನ್ನು ಕಾವಲು ಕಾಯುವ ಯೋಧರ ಸೇವೆ ಅನನ್ಯವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನು ನೆಮ್ಮದಿ, ಸುರಕ್ಷತೆ ಮತ್ತು ಸ್ವಾತಂತ್ರ್ಯದ ಬದುಕನ್ನು ಅನುಭವಿಸುತ್ತಿರುವುದಕ್ಕೆ ಭಾರತೀಯ ಸೇನೆಯ ಅಪ್ರತಿಮ ತ್ಯಾಗವೇ ಮೂಲ ಕಾರಣವಾಗಿದೆ” ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಮಾತನಾಡಿ, “ಪ್ರತಿಯೊಬ್ಬ ವ್ಯಕ್ತಿಗೂ ದೇವರು ವಿಶಿಷ್ಟ ಪ್ರತಿಭೆಯನ್ನು ನೀಡಿದ್ದಾನೆ. ಆ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲದೆ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೂ ಬಳಸಬೇಕು ಎಂದು ಕರೆ ನೀಡಿದರು. ನಾವು ಇಂದು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ದೇಶದ ಗಡಿಯಲ್ಲಿ ಕಾವಲು ಕಾಯುವ ಯೋಧರೇ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ತಂದೆ-ತಾಯಿ, ಗುರುಗಳು, ಸೈನಿಕರು,ರೈತರು ಹಾಗೂ ಮಾತೃಭೂಮಿಗೆ ಕೃತಜ್ಞರಾಗಿದ್ದು, ಉತ್ತಮ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಭಾರತೀಯ ಸೈನಿಕರ ಬಗ್ಗೆ ಹೆಮ್ಮೆ, ಗೌರವ ಮತ್ತು ದೇಶಪ್ರೇಮ ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ಸದಾ ಜೀವಂತವಾಗಿರಬೇಕು ಎಂದು ಹೇಳುತ್ತಾ 27 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಸಂಭವಿಸಿದ ಸಂಪೂರ್ಣ ಚಿತ್ರಣ ನಮ್ಮ ಮುಂದೆ ಕರ್ನಲ್ ನಿತಿನ್ ಬೀಡೆ ಕಟ್ಟಿಟ್ಟಿದ್ದಾರೆ. ಯುದ್ಧ ಭೂಮಿಯಲ್ಲಿ ಹೋರಾಡಿ ನಮಗೆ ಸ್ಫೂರ್ತಿಯಾಗಿದ್ದಾರೆ. ಯುದ್ಧ ಭೂಮಿಯಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ವಿಜಯಿಯಾದ ಅವರ ಎದುರು ನಮ್ಮ ವೈಯುಕ್ತಿಕ ಸಮಸ್ಯೆಗಳಾದ ಆಹಾರದ ಅರುಚಿ, ತಿಂಡಿಯ ವೈವಿಧ್ಯತೆ, ನೀರಿನ ತಾಪಮಾನತೆ, ಹವಾಮಾನ ವೈಪರಿತ್ಯ ಇತ್ಯಾದಿ ನಗಣ್ಯ ಎಂದು ಅವರು ವಿವರಿಸಿದರು. ಜೀವನದ ಮೂಲ ಉದ್ದೇಶ ಮತ್ತೊಬ್ಬರ ಬದುಕಿಗೆ ಆಸರೆಯಾಗುವುದು. ನಾವು ಪರೋಪಕಾರಿಗಳಾಗಿ ಬದುಕಿದಾಗ ಉಸಿರು ಹೋದರು ಹೆಸರು ಶಾಶ್ವತವಾಗಿ ಉಳಿಯುವುದು” ಎಂದು ಅವರು ನುಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಸ್ಥೆಯ ಎನ್ಸಿಸಿ ನೌಕಾದಳ ಹಾಗೂ ಭೂದಳದ ಕೆಡೆಟ್ಗಳಿಗೆ ಶಿಸ್ತು, ಜವಾಬ್ದಾರಿ, ಸೇವಾ ಮನೋಭಾವ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾದ ಎನ್ಸಿಸಿ ಬ್ಯಾರೆಟ್ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ''ಎ” ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ಎನ್ಸಿಸಿ ನೌಕಾದಳ ಮತ್ತು ಭೂದಳದ ಕೆಡೆಟ್ಗಳಿಗೆ ಎನ್ಸಿಸಿ 'ಎ' ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಈ ಪೈಕಿ ನೌಕಾದಳದ 9 ಕೆಡೆಟ್ಗಳು ಹಾಗೂ ಭೂದಳದ 10 ಕೆಡೆಟ್ಗಳು 'ಎ' ಗ್ರೇಡ್ ಪಡೆದು ಸಂಸ್ಥೆಯ ಎನ್ಸಿಸಿ ಘಟಕದ ಸಾಧನೆಗೆ ಮತ್ತಷ್ಟು ಕೀರ್ತಿ ತಂದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ಶಿಕ್ಷಕ ಪ್ರಜ್ವಲ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶಿಕ್ಷಕಿ ಸೌಮ್ಯ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ ನಡೆಸಿದರು ಕೆಡೆಟ್ ಸಾನ್ವಿ ಕಾರ್ಗಿಲ್ ವಿಜಯೋತ್ಸವದ ಮಹತ್ವ ತಿಳಿಸಿದರು.ವಿದ್ಯಾರ್ಥಿನಿ ಗಗನ ಸ್ವಾಗತಿಸಿ ಕೆಡೆಟ್ ನಿಶ್ಚಯ ವಂದಿಸಿದರು. ತನ್ಮಯ್ ರಾಜ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಯನ್ನು ಕಾಪಾಡಲು ಪ್ರಾಣಾರ್ಪಣೆ ಮಾಡಿದ ಕಾರ್ಗಿಲ್ ವೀರರಿಗೆ ಕೃತಜ್ಞ ನಮನ ಸಲ್ಲಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಸೇವಾ ಮನೋಭಾವ, ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರರಕ್ಷಣೆಯ ಬಗ್ಗೆ ಹೆಮ್ಮೆ ಹಾಗೂ ಗೌರವವನ್ನು ಬೆಳೆಸುವ ಸಾರ್ಥಕ ಪ್ರಯತ್ನವಾಗಿ ಈ ಕಾರ್ಯಕ್ರಮ ಗಮನ ಸೆಳೆಯಿತು.

Click here to View All