ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು – ಯುವರಾಜ್ ಜೈನ್ ಅಭಿಮತ.
ನಾವೆಲ್ಲಾ ಅಪ್ಪ ಎಂದರೆ ಪ್ರೀತಿ ಮಾಡುತ್ತೇವೆ. ನಮ್ಮ ಎಲ್ಲಾ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಹೀರೋ ಅಪ್ಪ. ಅಮ್ಮನಿಂದ ಜೀವ ಲಭಿಸಿಸಿದರೆ, ಅಪ್ಪನಿಂದ ಜೀವನ ಲಭಿಸುತ್ತದೆ. ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು. ಅಪ್ಪನ ಹೆಗಲ ಮೇಲೆ ಮಲಗಿದಾಗ ಆಗುವ ಆನಂದ ಮತ್ತೆಲ್ಲಿಯೂ ಸಿಗುವುದಿಲ್ಲ. ಅಪ್ಪ ನಮ್ಮ ಕಣ್ಣ ಮುಂದಿರುವ ನಿಜವಾದ ದೇವರು. ಅಪ್ಪನಿಂದ ಜೀವನದಲ್ಲಿ ಶಿಸ್ತು, ಬದುಕುವ ಕಲೆ ಎಲ್ಲವನ್ನೂ ಮಕ್ಕಳು ಕಲಿಯುತ್ತಾರೆ.ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತನಾಡಿ, ತಂದೆಯೇ ನನಗೆ ದೇವರು. ತಂದೆಯೇ ನನ್ನ ಖುಷಿ, ಸಂತಸ ಎಲ್ಲವೂ ಆಗಿದ್ದಾರೆ. ಅವರ ಮಮತೆ, ಮಾರ್ಗದರ್ಶನ ಮತ್ತು ತಾಳ್ಮೆ ನನ್ನ ಜೀವನವನ್ನು ಬೆಳಗಿಸುತ್ತಿವೆ. ಅವರು ಬೋಧಿಸಿದ ಪ್ರತೀ ಪಾಠ, ತೋರಿಸಿದ ಪ್ರತೀ ದಾರಿಯಲ್ಲಿ ನಾ ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಂಡು ಸಾಗುತ್ತಿದ್ದೇನೆ. ನನ್ನ ಕನಸುಗಳಿಗೆ ಚೆನ್ನಾಗಿ ನಿಂತು ನಾ ಓಡಿದಾಗ ಹಿಂದೆಯೇ ಓಡಿ ನೀಡಿದ ಆಶೀರ್ವಾದಗಳ ನೆರಳನ್ನು ನಾನು ಇಂದಿಗೂ ಅನುಭವಿಸುತ್ತಿದ್ದೇನೆ. ತಂದೆ ಮಕ್ಕಳ ನಡುವಿನ ಪ್ರೀತಿ, ಒಲುಮೆ, ಭಾಂದವ್ಯ ಎಂದಿಗೂ ಮರೆಯಲಾಗದು. ಮಕ್ಕಳಾದ ನಾವು ನಮ್ಮ ತಂದೆಯ ನೋವು-ನಲಿವುಗಳೆಲ್ಲವೂ ತಿಳಿದಿರಬೇಕು. ಅವರ ಪ್ರತೀ ಹೆಜ್ಜೆಯಲ್ಲಿಯೂ ನಾವೂ ಅವರ ಜೊತೆಯಾಗಿರಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳ ತಂದೆ ಹಾಗೂ ಟ್ರಸ್ಟಿಯೂ ಆಗಿರುವ ಕೆ.ರಾಜರತ್ನ ಜೈನ್ ಮಾತನಾಡಿ ನನ್ನ ಮಗಳ ಯಶಸ್ಸಿನಲ್ಲಿ ನನಗೆ ಹೆಮ್ಮೆ ಇದೆ. ಇಂದು ಅತ್ಯುತ್ತಮವಾದ ಜೀವನವನ್ನು ರೂಪಿಸಿಕೊಂಡು ನನ್ನ ಮುಂದಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದರೂ, ಅವರೊಂದಿಗೆ ಇರುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳ ಬೆಳವಣಿಗೆಯೇ ನನಗೆ ಅತ್ಯುತ್ತಮ ಗೌರವ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಇವರ ಪಾದಪೂಜೆ ಮಾಡಿ ಗೌರವಿಸಿ ಸನ್ಮಾನಿಸಿದರು.