ಎಕ್ಸಲೆಂಟ್ ಮೂಡುಬಿದಿರೆ: ಕೊವಿಡ್ ಲಸಿಕಾ ಕಾರ್ಯಕ್ರಮ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಕಲ್ಲಬೆಟ್ಟು, ಮೂಡಬಿದಿರೆ ಇದರ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋವಿಡ್ ರೋಗವನ್ನು ತಡೆಗಟ್ಟುವಲ್ಲಿ ನಾವೆಲ್ಲ ಸರಕಾರದ ನಿಯಮಗಳನ್ನು ನಮ್ಮ ಕರ್ತವ್ಯವೆಂದು ತಿಳಿದು ಪಾಲಿಸಬೇಕು, ಲಸಿಕೆ ಎಲ್ಲಿ ವಿತರಿಸುತ್ತಾರೆ ಅಲ್ಲಿಗೆ ನಾವು ತೆರಳಿ ಲಸಿಕೆಯನ್ನು ಪಡೆದು ಅರೊಗ್ಯವಂತರಾಗಿ ಇರಲು ಪ್ರಯತ್ನ ಪಡಬೇಕು ಎಂದರು. ಜಗತ್ತಿನಲ್ಲಿ ಉಚಿತ ಲಸಿಕೆಯನ್ನು ವಿತರಿಸುತ್ತಿರುವ ಏಕೈಕ ದೇಶ ಭಾರತ, ಸರಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿ ಆದಷ್ಟು ಬೇಗ ಈ ಮಹಾಮಾರಿಯನ್ನು ಓಡಿಸಲು ಎಲ್ಲರೂ ಲಸಿಕೆಯನ್ನು ಪಡೆಯಬೇಕೆಂದು ನುಡಿದರು.

ಮುಖ್ಯ ಅತಿಥಿ ಅರೋಗ್ಯ ಸಮುದಾಯ ಕೇಂದ್ರ ರಕ್ಷಾ ಸಮಿತಿಯ ಸದಸ್ಯರಾದ ಬಾಹುಬಲಿ ಪ್ರಸಾದ್ ಇವರು ಲಸಿಕೆ ವಿತರಣೆಯಲ್ಲಿ ಮೂಡಬಿದಿರೆ ಇತರ ತಾಲೂಕಿಗಿಂತ ಮುಂಚೂಣಿಯಲ್ಲಿದ್ದು ಆದಷ್ಟು ಬೇಗ ಮೂಡಬಿದಿರೆಯ ಎಲ್ಲಾ ವ್ಯಕ್ತಿಗಳಿಗೂ ಲಸಿಕೆ ನೀಡುವ ಗುರಿಯನ್ನು ಮುಟ್ಟುವಲ್ಲಿ ಶ್ರಮಿಸುತ್ತಿರುವ ಶಾಸಕರು ಹಾಗೂ ಎಲ್ಲಾ ಆರೋಗ್ಯ ಸಿಬ್ಬಂದಿಗಳು ಅಭಿನಂದನೀಯರು ಎಂದು ನುಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಇವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ವಿದ್ಯಾದಾನವಲ್ಲದೆ, ಸುತ್ತಿಲಿನ ಪ್ರದೇಶದ ಎಲ್ಲಾ ರೀತಿಯ ಅಭಿವೃದ್ಧಿಯ ಕಡೆಗೂ ಗಮನ ಹರಿಸುತ್ತಿದ್ದು ಶಾಸಕರ ಅಥವಾ ಸರಕಾರದ ಯವುದೇ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಸಂಪೂರ್ಣ ಬೆಂಬಲ ನೀಡುತ್ತಿದ್ದು ಇನ್ನು ಮುಂದೆಯೂ ಇದೇ ರೀತಿಯ ಸಹಕಾರವನ್ನು ಮುಂದುವರೆಸಲು ಸಿದ್ಧರಿದ್ದೇವೆ ಎಂಬ ಭರವಸೆಯನ್ನು ನೀಡಿದರು.

ವೇದಿಕೆಯಲ್ಲಿ ಮೂಡಬಿದಿರೆ ಪುರಸಭೆಯ ಉಪಾಧ್ಯಕ್ಷರಾದ ಸುಜಾತ ಶಶಿಧರ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.